Tuesday, August 2, 2022

Father Forgets : ಮಕ್ಕಳಿಗೆ ಬೈಯುವ ಪೋಷಕರಿಗಾಗಿ


ಮಕ್ಕಳಿಗೆ ಬೈಯುವ ಪೋಷಕರಿಗಾಗಿ:


ತಂದೆ ತಾಯಂದಿರು ಅಗಾಗ ತಮ್ಮ ಮಕ್ಕಳನ್ನು ಬೈಯುವುದುಂಟು; ದೂಷಿಸುವುದುಂಟು. 'ಬೇಡ' ಎನ್ನಲಾರೆ, ಆದರೆ, ಅವರನ್ನು ಬೈಯುವ ಮುನ್ನ ಅಮೆರಿಕನ್ ಶ್ರೇಷ್ಠ ಕೃತಿಗಳಲ್ಲೊಂದಾದ 'ಫಾದರ್ ಫರ್ಗೆಟ್ಸ್'ನ (Father Forgets) ಒಂದು ಲೇಖನದ ತುಣುಕನ್ನು ಓದಿ ನೋಡಿ ಎಂದಷ್ಟೇ ಹೇಳಬಯಸುತ್ತೇನೆ.

“ಕೇಳು ಕಂದಾ...... ನೀನು ಗಾಢ ನಿದ್ರೆಯಲ್ಲಿರುವಾಗ ನಾನು ಇದನ್ನೆಲ್ಲ ಹೇಳುತ್ತಿರುವೆ. ನಿನ್ನ ಪುಟ್ಟ ಮುಂಗೈ ನಿನ್ನ ನುಣುಪಾದ ಕೆನ್ನೆಯಡಿಯಲ್ಲಿ ಅದು ಹೇಗೆ ಮುದುಡಿ ಮಲಗಿದೆ! ಆ ಸುಂದರ ಗುಂಗುರು ಕೂದಲು ನಿನ್ನ ತೇವವಾದ ಹಣೆಯಲ್ಲಿ ಅದೆಷ್ಟು ಒದ್ದೆಯಾಗಿ ಅಂಟಿಕೊಂಡಿದೆ! ನಿದ್ದೆಯಲ್ಲಿರುವಾಗ ಎಷ್ಟೊಂದು ಸುಂದರವಾಗಿ ಕಾಣುತ್ತಿದ್ದೀಯ ನೀನು! ನಾನು ಒಬ್ಬಂಟಿಯಾಗಿ, ಸದ್ದಿಲ್ಲದೆ ನಿನ್ನ ರೂಮ್ ಪ್ರವೇಶಿಸಿರುವೆ. ಏಕೆಂದರೆ, ಕೆಲವೇ ಕೆಲವು ನಿಮಿಷಗಳ ಮೊದಲು, ಲೈಬ್ರೆರಿಯಲ್ಲಿ ಪೇಪರ್ ಓದುತ್ತಾ ಕುಳಿತಿದ್ದಾಗ, ಒಂದು ತೀಕ್ಷ್ಣ ಪರಿತಾಪದ ಅಲೆ ನನ್ನ ಮನದಲ್ಲಿ ಹಾದು ಹೋಗಿತ್ತು. ಯಾವುದೋ ತಪ್ಪಿತಸ್ಥ ಭಾವನೆಯಿಂದ ನಿನ್ನ ಬಳಿ ಬಂದಿರುವ ನಾನು.

ಕಂದಾ, ನಾನಾಗ ವೃಥಾ ನಿನ್ನ ಮೇಲೆ ರೇಗಾಡಿಬಿಟ್ಟೆ. ನೀನು ಸ್ಕೂಲಿಗೆ ಹೊರಡಲು ಡ್ರೆಸ್ ಮಾಡಿಕೊಳ್ಳುತ್ತಿದ್ದಾಗ ಯಾಕೋ ಬೈದುಬಿಟ್ಟೆ. ನಿನ್ನ ಮುಖವನ್ನು ನೀನು ಟವೆಲ್ ನಿಂದ ಹೊಡೆದುಕೊಳ್ಳುತ್ತಿದ್ದುದನ್ನು ನೋಡಿ ರೇಗಿಬಿಟ್ಟೆ ಕಣೋ. ನಿನ್ನ ಶೂಗಳನ್ನು ಕ್ಲೀನ್ ಮಾಡದೇ ಇರುವುದಕ್ಕೂ ಬೈದುಬಿಟ್ಟೆ. ನಿನ್ನ ಯಾವುದೋ ಆಟಿಕೆಯನ್ನು ನೆಲದ ಮೇಲೆ ಬಿಸಾಕಿದ್ದಕ್ಕಾಗಿ ಎಷ್ಟೊಂದು ಆರ್ಭಟಿಸಿದೆ ನಾನು!

ತಿಂಡಿ ತಿನ್ನುವಾಗ ಕೂಡ ನಾನು ನಿನ್ನನ್ನು ಬಿಡಲಿಲ್ಲ. ಸುಮ್ಮನೇ ತಪ್ಪು ಹುಡುಕಿದೆ. ನೀನು ಅದೇನನ್ನೋ ಚೆಲ್ಲಿಬಿಟ್ಟಿದ್ದಕ್ಕೆ, ತಿಂಡಿಯನ್ನು ಲಗುಬಗನೆ ತಿಂದಿದ್ದಕ್ಕೆ, ಮೇಜಿನ ಮೇಲೆ ಕೈಯನ್ನೂರಿ ಕುಳಿತದ್ದಕ್ಕೆ, ಬ್ರೆಡ್‌ ಮೇಲೆ ಬೆಣ್ಣೆಯನ್ನು ಅತಿಯಾಗಿ ಸುರುವಿದ್ದಕ್ಕೆ, ಇವೆಲ್ಲದಕ್ಕೂ ನಾನು ರೇಗಿಬಿಟ್ಟೆ.

ನೀನು ಆಟಕ್ಕೆ ಹೊರಡುತ್ತಿದ್ದಂತೆ, ನಾನು ಟ್ರೇನಿಗೆ ಹೊರಟಿದ್ದೆ. ನೀನು ನನ್ನತ್ತ ತಿರುಗಿ ಕೈಬೀಸಿದೆ. ಅದೆಷ್ಟು ಮುದ್ದಾಗಿ ''ಗುಡ್‌ಬೈ ಡ್ಯಾಡಿ'' ಅಂದೆ. ಪ್ರತಿಯಾಗಿ ನಾನೇನು ಮಾಡಿದೆ? “ಸುಮ್ಮನೆ ನಡೆಯಾಚೆ” ಎಂದಿದ್ದೆ ಒರಟಾಗಿ.

ಸಂಜೆ ಕೂಡ ಹಾಗೇ ಆಯ್ತು. ನಾನು ಮನೆಗೆ ಬರುತ್ತಿದ್ದಂತೆ ನೀನು ಮಂಡಿಯೂರಿ ಗೋಲಿ ಆಡುತ್ತಿದ್ದುದನ್ನು ಕಂಡೆ. ನಿನ್ನ ಕಾಲ್ಚೀಲ ತೂತಾಗಿಬಿಟ್ಟಿತ್ತು. ನಾನು ನಿನ್ನ ಸ್ನೇಹಿತರ ಎದುರಲ್ಲೇ ನಿನ್ನನ್ನು ಮನೆಗಟ್ಟಿದೆ. ನಿನಗೆ ಅಪಮಾನ ಮಾಡಿಬಿಟ್ಟೆ. ಆ ಕಾಲ್ಚೀಲ ಬಹು ದುಬಾರಿ ಕಣೋ! ಒಬ್ಬ ತಂದೆ ಹೇಳುವುದನ್ನು ಕೊಂಚ ಕೇಳು ಮಗನೇ!

ನೆನಪಿದೆಯಾ ನಿನಗೆ, ಆನಂತರ ನಾನು ಲೈಬ್ರರಿಯಲ್ಲಿ ಏನನ್ನೋ ಓದುತ್ತಾ ಕುಳಿತಿದ್ದಾಗ ನೀನು ಹೇಗೆ ಹೆದರಿ ಹೆದರಿ ಒಳ ಬಂದೆ ಎಂದು? ನಿನ್ನ ಪುಟ್ಟ ಕಂಗಳಲ್ಲಿ ಆದ್ಯಾವುದೋ ನೋವಿನ ಛಾಯೆ ಇತ್ತಲ್ಲವೇ? ನಾನು ಅಸಹನೆಯಿಂದ ನಿನ್ನತ್ತ ದೃಷ್ಟಿ ಹರಿಸಿದಾಗ ನೀನೇನು ಮಾಡಿದೆ? ಬಾಗಿಲ ಮರೆಯಲ್ಲಿ ಅಂಜಿ ನಿಂತೆ ಅಲ್ಲವೇ? ಆಗಲೂ ನಾನು ಮಾಡಿದ್ದೇನು? “ಏನು ಬೇಕು ನಿನಗೆ'' ಎಂದು ಹರಿಹಾಯ್ದಿದ್ದೆ. ಅಲ್ಲವೇ?

ನೀನು ಏನೂ ಹೇಳಲಿಲ್ಲ. ಆದರೆ, ಓಡಿ ಬಂದುಬಿಟ್ಟೆ ನೋಡು! ನಿನ್ನ ಮುದ್ದಾದ ಮೃದು ಕೈಗಳನ್ನು ನನ್ನ ಕತ್ತಿನ ಸುತ್ತ ಬಳಸಿ ನನ್ನನ್ನು ಹೇಗೆ ಮುದ್ದಿಸಿಬಿಟ್ಟೆ ನೋಡು! ನಿನ್ನ ಪುಟ್ಟ ಹೃದಯದಲ್ಲಿ ಅದೆಂಥ ಪ್ರೀತಿ ಅಡಗಿತ್ತು! ನಾನು ನಿನ್ನ ಬೈದರೂ ಕೂಡ ನೀನು ಅದೆಂಥ ನಿರ್ಮಲ ಪ್ರೀತಿ ತೋರಿಸಿಬಿಟ್ಟೆ ನನಗೆ!

ನೀನು ತಟುಪುಟು ಸದ್ದು ಮಾಡುತ್ತಾನನ್ನ ರೂಮಿನಿಂದ ಹೊರಟು ಹೋದೆ. ಮಗನೇ, ಅದಾದ ತುಸು ಹೊತ್ತಿನಲ್ಲೇ ನೋಡು, ನನ್ನ ಪೇಪರ್ ನನ್ನ ಕೈಯಿಂದ ಜಾರಿ ಬಿದ್ದಿತ್ತು! ಯಾವುದೋ ವ್ಯಥೆ ನನ್ನನ್ನು ಆವರಿಸಿಬಿಟ್ಟಿತ್ತು! ನನ್ನ ದುರಭ್ಯಾಸಗಳು - ತಪ್ಪು ಹುಡುಕುವ ನನ್ನ ಆ ದುರಭ್ಯಾಸ…. ಗದರಿಸುವ ನನ್ನ ಆ ಕೆಟ್ಟ ಚಟ... ನನ್ನಿಂದ ಏನೇನು ಮಾಡಿಸುತ್ತಿವೆ! ನನ್ನ ಮಗುವಾಗಿ ಹುಟ್ಟಿದ್ದಕ್ಕೆ ಇವೇ ಏನು ನಾನು ನೀಡೋ ಪ್ರತಿಫಲ?

ಇದೆಲ್ಲದರ ಅರ್ಥ ನಾನು ನಿನ್ನನ್ನು ಪ್ರೀತಿಸುತ್ತಿಲ್ಲ ಎಂದಲ್ಲ ಕಂದಾ! ಬಹುಶಃ ನಾನು ನಿನ್ನಿಂದ ಬಹಳಷ್ಟು ನಿರೀಕ್ಷಿಸುತ್ತಿದ್ದೇನೆ ಅಂತ ಕಾಣುತ್ತೆ. ಬಹುಶಃ ನನ್ನ ವಯಸ್ಸಿನ ಮಾನದಂಡದಿಂದಲೇ ನಾನು ನಿನ್ನನ್ನು ಅಳೆಯುತ್ತಿದ್ದೇನೆ ಅನಿಸುತ್ತೆ. ನನ್ನ ವಯಸ್ಸೆಲ್ಸಿ ನಿನ್ನ ವಯಸ್ಸೆಲ್ಲಿ? ನಾನು ಮಾಡೋದನ್ನು ನೀನೂ ಮಾಡಲು ಸಾಧ್ಯವೇ?

ನಿನ್ನ ವ್ಯಕ್ತಿತ್ವದಲ್ಲಿ ಅದೆಷ್ಟು ಉತ್ತಮ ಅಂಶಗಳಿಲ್ಲ? ನಿನ್ನ ಪುಟ್ಟ ಹೃದಯ ಅದೆಷ್ಟು ವಿಶಾಲ! ಓಡಿ ಬಂದು ನನ್ನನ್ನು ಮುದ್ದಿಸಿದ ಆ ನಿನ್ನ ನಡವಳಿಕೆಯೇ ಸಾಕ್ಷಿಯಲ್ಲವೇ ಅದಕ್ಕೆ?

ಈ ರಾತ್ರಿ ಬೇರೇನೂ ನೆನಪಾಗುತ್ತಿಲ್ಲ ಮಗನೇ! ನಿನ್ನ ಬಳಿ ಬಂದು ನಾಚಿಕೆಯಿಂದ ಮಂಡಿಯೂರಿ ಕುಳಿತಿರುವ ನೋಡು.

ಇದೊಂದು ಪುಟ್ಟ ಪ್ರಾಯಶ್ಚಿತ್ತ ಅಷ್ಟೆ. ನೀನು ಎಚ್ಚರದಿಂದಿರುವಾಗ ನಾನು ಇದನ್ನೆಲ್ಲ ಹೇಳಿದರೆ ನೀನು ಖಂಡಿತ ಇದನ್ನೆಲ್ಲ ಅರ್ಥ ಮಾಡಿಕೊಳ್ಳಲಾರೆ. ಅದು ನನಗೆ ಗೊತ್ತು. ಆದರೆ ನಾಳೆ… ಆದರೆ ನಾಳೆ... ನಾನು ಖಂಡಿತ ನಿಜವಾದ ಡ್ಯಾಡಿ ಆಗುವೆ; ನಿನ್ನ ಆಪ್ತಮಿತ್ರನಾಗಿ ಬಿಡುವೆ. ನೀನು ನೋವುಂಡರೆ ನಾನೂ ನೋವುಣ್ಣುವೆ. ನೀನು ನಕ್ಕಾಗ ನಾನೂ ನಗುವೆ. ಸಹನೆ ಮೀರಿದ ಮಾತುಗಳು ಹೊರಬಂದರೆ ತುಟಿಗಳನ್ನು ಕಚ್ಚಿ ಹಿಡಿಯುವೆ. 'ಅವನು ಬೇರಾರೂ ಅಲ್ಲ... ಒಬ್ಬ ಹುಡುಗ... ಒಬ್ಬ ಪುಟ್ಟ ಹುಡುಗ' ಎಂದು ನನ್ನಷ್ಟಕ್ಕೇ ಹೇಳಿಕೊಳ್ಳುವೆ... ಹೇಳಿಕೊಳ್ಳುತ್ತಲೇ ಇರುವೆ. ಮಂತ್ರವನ್ನು ಜಪಿಸಿದಂತೆ!

ನಾನು ನಿನ್ನನ್ನು ದೊಡ್ಡವನಂತೆ ಕಂಡೆನೇನೋ ಎಂಬ ಶಂಕೆ ಕಾಡುತ್ತಿದೆ ನನ್ನ ಮನದಲ್ಲಿ. ನಿನ್ನನ್ನು ನೋಡಿದರೆ ನೀನು ಇನ್ನೂ ಪುಟ್ಟ ಶಿಶುವಿನಂತೆಯೇ ಕಾಣುತ್ತಿರುವೆ. ನಿನ್ನೆ ತಾನೇ ನಿನ್ನ ಅಮ್ಮನ ತೋಳ ಆಸರೆಯಲ್ಲಿ ಲಾಲಿ ಹಾಡು ಕೇಳುತ್ತಾ ಮಲಗಿದ್ದವನು ನೀನು! ನಿನ್ನಂಥ ಪುಟ್ಟ ಕಂದನಿಂದ ಅತಿಯಾಗಿ ಅಪೇಕ್ಷಿಸಿಬಿಟ್ಟೆ!.....ಅತಿಯಾಗಿ ನಿರೀಕ್ಷಿಸಿಬಿಟ್ಟೆ....."

ಮಕ್ಕಳನ್ನು ಸುಮ್ಮಸುಮ್ಮನೆ ದೂಷಿಸುವ ಬದಲು ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಅವರು ಏನನ್ನು ಮಾಡುತ್ತಿದ್ದಾರೋ, ಅದನ್ನು ಯಾಕೆ ಮಾಡುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸೋಣ. ಅದು ಟೀಕೆ-ದೂಷಣೆಗಿಂತ ಎಷ್ಟೋ ಹೆಚ್ಚು ಉತ್ತಮ ಕೆಲಸ ಮತ್ತು ಪ್ರಯೋಜನಕಾರಿ ಕೆಲಸ. ಅದರಿಂದ ಸಹಾನುಭೂತಿ, ಸಹನೆ, ಕರುಣೆಯಂಥ ಉತ್ತಮ ಗುಣಗಳು ನಮ್ಮ ವಶವಾಗಿಬಿಡುತ್ತವೆ. “ಎಲ್ಲರನ್ನೂ ಅರ್ಥ ಮಾಡಿಕೊಳ್ಳುವುದೆಂದರೆ ಎಲ್ಲರನ್ನೂ ಮನ್ನಿಸುವುದು” (To know all is to forgive all) – ಈ ಮಾತನ್ನು ಸದಾ ನೆನಪಲ್ಲಿಟ್ಟುಕೊಳ್ಳೋಣ.

ಡಾ. ಜಾನ್ಸನ್ ಹೇಳುತ್ತಾನೆ – “ಸ್ವಶಃ ದೇವರು ಕೂಡ ಮನುಷ್ಯನ ಗುಣಾವಗುಣಗಳನ್ನು, ಆತನ ಕೊನೆಗಾಲದವರೆಗೂ ವಿಮರ್ಶಿಸಹೋಗುವುದಿಲ್ಲ.''
ಹಾಗಿರುವಾಗ, ನಾವು- ನೀವು ಏಕೆ ವಿಮರ್ಶಿಸಹೋಗಬೇಕು ಅಲ್ಲವೇ?
ಸೂತ್ರ: ಯಾರನ್ನೂ ಟೀಕಿಸಬೇಡಿ, ಯಾರನ್ನೂ ದೂಷಿಸಬೇಡಿ ಅಥವಾ ಯಾರನ್ನೂ ದೂರಬೇಡಿ.


Study + Steady + Sadhana = SucceSS SADHANA MODEL TEST - 50 1. ಕೆಳಗಿನವುಗಳಲ್ಲಿ ಹ್ರಸ್ವಸ್ವರಗಳಿಗೆ ಉದಾಹರಣೆ ಯಾವುದು? a) ಕ ಖ ಗ ಘ b) ಆ ಈ ಊ ಏ ಐ ಓ ಔ c) ...